ಆ ಸಂಜೆ ನೀ ಬರಲು, ಹೂ ಹಿಡಿದು ನಿಂತಿರಲು
ನಿನ್ನ ಕಂಡ ನಾನಾದೆ ಪೂರ್ಣ ಸ್ಥಬ್ಧ ||
ಹೇಗೆ ನಾ ವರ್ಣಿಸಲಿ, ಏನೆಂದು ಬಣ್ಣಿಸಲಿ
ಹಿಂದೆಂದೂ ನೋಡಿರದ ಅಂಥ ಅಂದ ||
ಹೂ ಕಂತೆ ನೀ ಕೊಡಲು, ನಾನದನು ಪಡೆದಿರಲು
ಮನದಲ್ಲೇ ಗೀಚಿದೆನು ನಿನ್ನ ಚಿತ್ರಪಟವ ||
ಬಾಯ್ಮಾತು ಬರದಿರಲು, ಕಿವಿ ಗುಂಗಾಗಿರಲು
ಮರೆಸಿತ್ತು ನಿನ್ನಂದ ನನ್ನೆಲ್ಲ ಜಗವ, ನನ್ನೆಲ್ಲ ಜಗವ ||
~🪔~
ಏಕೆ ಈ ಪರಿ ಇಣುಕಿಹೆ ಎನ್ನ ಎದೆಯೊಳಗೆ ನೀನಿಂದು
ಕದ ತೆಗೆದು ಕಾಲಿಟ್ಟು ಒಳ ಹೊಕ್ಕಿ ನೋಡೊಮ್ಮೆ ||
ಬೆಳಕಿಹುದು ಹೊಳಪಿಹುದು ಎನ್ನ ಮನವೆಂಬ ಮನೆಪೂರ
ಇದಕೆ ಕಾರಣ ನಾ ಬರೆದ ನಿನ್ನ ಹೆಸರು ಹಿಂದೊಮ್ಮೆ ||
~🪔~
ನಾ ನಿನ್ನ ಪ್ರೇಮಿ, ನೀ ನನಗೆ ದೇವತೆಯು
ಪ್ರೀತಿ ಪೂಜೆಗೆ ಅಣಿಯು ಈ ನನ್ನ ಜೀವ ||
ಗುಟ್ಟಾದ ಪ್ರೀತಿಯನು ಶ್ಲೋಕ ರೂಪದಿ ಹೇಳ್ವೆ
ಆಲಿಸಲು ನೀ ನನ್ನ ಮನದ ಭಾವ ||
ನಿನಗೆ ನೈವೇದ್ಯೆಗಯ್ಲು ಹೃದಯವನೆ ತಂದಿಹೆನು
ವರ ನೀಡಲಿನ್ನೇಕೆ ಮೀನಮೇಷ ||
ಬಹಳ ಕಾದಿಹೆನು ನಿನಗೆ, ಒಲಿದು ಬಾ ಬೇಗಿನ್ನು
ಧರಿಸಲಾಗದು ಋಷಿಯ ಈ ಹಗಲುವೇಷ ||
~🪔~
ಕರಿ ಮೋಡ ಕರಿ ಮೋಡ ಏನಿದು ನಿನ್ನಾಟ
ನೋಡಲಾರೆನು ನಾನು, ಈ ನಿನ್ನ ಮೈಮಾಟ ||
ತಡೆ ಹಿಡಿ ಭಾವನೆಯ, ಗೃಹವಿಹುದು ಬಲು ದೂರ
ನೀನೀಗಲೇ ಸುರಿದರೆ ನೆನಿಯುವೆನು ನಾ ಪೂರಾ ||
ಕರುಣೆ ತೋರು ದಯವಿಟ್ಟು, ಕೈ ಮುಗಿದು ಕೇಳುವೆನು
ಮನೆ ತಲುಪಿದಾ ಮೇಲೆ ನಾ ನಿನಗೆ ಹೇಳುವೆನು ||
ಇರುಳು ಸುರಿಯಲು ನೀನು ಸುಂದರವೀ ಸಂಸಾರ
ನೀ ಹೀಗೆ ಮಾಡಲು ನಿನಗೆ ಇಡೀ ಜಗವೇ ಆಭಾರ ||
~🪔~
ರವಿ ರಾಜನು ಅಸ್ಥಮಿಸಲು, ಮೇಘ ಮುಸುಕಿದ ಜಾವ
ಮಳೆ ರಾಯನು ಕೊಂಚ ಸುರಿಯಲು, ತಣ್ಣಗಾಯಿತು ಜೀವ |
ಮನದರಸಿ ಜೊತೆಗಿರಲು, ಹೃದಯದಲಿ ಪ್ರಣಯದ ಭಾವ
ನಯನಗಳ ಸಲ್ಲಾಪದಲಿ, ಮರೆಯೋಣ ನೂರೆಂಟು ನೋವ ||
~🪔~
ಬಾನ ಬಯಲಲಿ ನಡೆದಿಹುದು ಮೇಘಗಳ ಆಟ
ನಾ ಮುಂದು ತಾ ಮುಂದು ಎಂದು ಮಳೆಹನಿಗಳ ಓಟ ||
ನಡುವೆ ನೇಸರನು ಬಂದು ಕೊಂಚ ಮಾಡಿಹನು ಮಾಟ
ಇದುವೆ ನಯನ ನಾಟುವ ಬಹು ಸುಂದರ ನೋಟ ||
~🪔~
ಹೇಳಬಯಸುವೆನನಿಸಿಕೆಯ, ನನ್ನೆಡೆಯೇ ಗಮನವಿರಲಿ
ಸಾಲುಗಳೇ ಸಾಲದು, ನಾನೇನೆಂದು ವಿವರಿಸಲಿ |
ಹಾಗೊಂದು ಹೀಗೊಂದು ಪದವಿಹುದೀ ಮನಸಿನಲಿ
ಸವಿಗವನವ ಬರೆದಿಹೆನು, ಹೀಗಿವಳ ಹೆಸರಿನಲಿ ||
ಸಿಹಿಸಕ್ಕರೆ ನುಡಿಯವಳು, ಸವಿಜೇನ ನಡೆಯವಳು
ಮೃದುಮಲ್ಲಿಗೆ ಮನದವಳು, ಹಸುಹಾಲ ಗುಣದವಳು |
ಬಹುನೇರ ನುಡಿಯುವಳು, ನುಡಿದಂತೆ ನಡೆಯುವಳು
ಬೆಳಗಾವಿ ಮಣ್ಣವಳು, ಕೆಚ್ಚೆದೆಯ ಹೆಣ್ಣಿವಳು ||
ಸದಾ ಹಸನ್ಮುಖಿ ಇವಳು, ನಗು ತರುವಳು ಪೂರ್ತಿ
ಪರಮಾಪ್ತಳು ನನಗೆ, ಈ ಚಿಕ್ಕ ಮೂರ್ತಿ |
ಇವಳದೀ ಕವಿತೆಗೂ ಇವಳಲ್ಲವೇ ಸ್ಪೂರ್ತಿ
ಮನದುಂಬಿ ಹರಸುವೆನು, ಇವಳದಾಗಲಿ ಕೀರ್ತಿ ||
ಪುಣ್ಯ ಮಾಡಿಹೆನು, ಇವಳ ಸ್ನೇಹವಾಯಿತು ಪ್ರಾಪ್ತಿ
ಇವಳಿಂದ ವಿಶಿಷ್ಟವು ಎನ್ನ ಗೆಳೆತನದ ವ್ಯಾಪ್ತಿ |
ಮನದಿ ಹರುಷವಿದೆ, ಈ ಸಂಗ ತಂದಿದೆ ತೃಪ್ತಿ
ನಲ್ಮೆಯ ಗೆಳತಿ ಇವಳು, ಇವಳ ಹೆಸರೂ ತೃಪ್ತಿ ||
~🪔~
ಕ್ಷಣ ಪ್ರತಿಕ್ಷಣ ಬಾಳ ಕಣಕಣದಲೂ ನಗುವಿರಲಿ
ನಿಮಿಷ ನಿಮಿಷವೂ ಹರುಷ ಮನದಿ ನೆಲೆಸಿರಲಿ |
ಘಂಟೆ ಘಂಟೆಗೂ ಖುಷಿಯ ಗಂಟೊಂದು ಸಿಗುತಿರಲಿ
ಕಾಲವೇ ಕಾಲವಾದರೂ ನಿನ್ನ ಸತ್ಕಾಲ ನಿಲ್ಲದಿರಲಿ ||
~🪔~
ನೀ ತೆರಳಿರುವೆ ಎಂಬುದನು ಮರೆತು ನಾ ಹೋಗುವೆನು |
ಮರಳಿ ಬರುವೆಯೆಂದು ನಿನ್ನ ದಾರಿಯನೇ ಕಾಯುವೆನು ||
ಲಕ್ಷ ಮಂದಿಯ ಮಧ್ಯೆ ನಿನ್ನ ಕಾಣುವ ಹಂಬಲವು |
ಯಾರನೇ ನೋಡಿದರೂ ನಿನ್ನ ನೋಡಿದ ಗೊಂದಲವು ||
ನೀ ಬರುತಿದ್ದ ಹಾದಿಯಲೇ ನಿಂತು ನಾ ಕಾದಿಹೆನು |
ನಿಜವನರಿತೀಗ ಎನ್ನ ಮನೆದಾರಿ ನೋಡಿಹೆನು ||
ನೆನಪಿನಂಗಳವೀಗ ನೀನಿಲ್ಲದೀ ಊರು |
ಕಳೆದ ಕ್ಷಣಗಳ ನೆನೆದು ನಗೆ ಕೊಂಚ ನೀ ಬೀರು ||
~🪔~
ಉಡುಗೊರೆಯ ಕಳಿಸಿಹೆನು ನಿನಗಾಗಿ ನಾನಿಂದು
ಕವನವ ಓದಲು ನೀ ಅರಿಯುವೆ ನಾ ಯಾರೆಂದು |
ಹಾಡಿ ಕುಣಿದು ನಲಿದಾಡು, ಈ ಸುದಿನವು ನಿನದಿಂದು
ಸದಾ ನಗುತಿರಬೇಕಂಬ ಹಾರೈಕೆಯು ನನದೆಂದೂ ||
~🪔~
ಗರ್ಭದಲಿ ನಿನ್ನ ಮಲಗಿರುವೆ, ಮಡಿಲಲ್ಲಿ ಮಲಗುವಾಸೆ
ಕರಳ ಬಳ್ಳಿಯ ಹಿಡಿದಿರುವೆ, ನಿನ್ನ ಬೆರಳ ಹಿಡಿಯುವಾಸೆ |
ಕೇವಲ ಕನಸಲೇ ಕಂಡಿರುವೆ, ನಿನ್ನ ಕಣ್ಮುಂದೆ ಕಾಣುವಾಸೆ
ಮುದ್ದಾದ ನಿನ್ನ ಮೊಗಕೆ, ಮುತ್ತಿನಂಥಹ ಮುತ್ತಿಡುವಾಸೆ ||
ಬೆಚ್ಚಗಿನ ಭದ್ರಕೋಟೆಯಿದು, ನಾನೇ ಮಹಾರಾಣಿ ಇಲ್ಲಿ
ಕೆಲಸವಿಲ್ಲ, ಕಾರ್ಯವಿಲ್ಲ, ದಿನಗಳೆಯುವೆ ಬರೀ ನಿದ್ದೆಯಲ್ಲಿ |
ಊಟವೂ ಇಲ್ಲೇ, ಆಟವೂ ಇಲ್ಲೇ, ನನ್ನ ಕೇಳುವರಾರಿಲ್ಲಿ!
ಇನ್ನೆಷ್ಟು ದಿನಗಳ ವಾಸವೋ, ನನಗೀ ಒಂಟಿ ಒಳಜಗದಲ್ಲಿ ||
ಈ ನಿನ್ನ ಉದರದರಮನೆಯ ಕಿರಿ ಕಂದಮ್ಮಳು ನಾನು
ನನ್ನ ನೋಡುವ ತುಡಿತ ನಿನಗಿನ್ನೂ ಬಂದಿಲ್ಲವೇನು? |
ನಿನ್ನ ಲಾಲಿಹಾಡ ಕೇಳಲು ತವಕದಿ ಕಾದಿಹೆನು ನಾನು
ಅಮ್ಮಾ ನಾನಿಲ್ಲಿರುವೆ, ನಿನಗದರ ಅರಿವಿದೆಯೇನು? ||
ಆಸೆಗಳನು ನನ್ನ ಹೇಳಿಹೆನು, ಕಿವಿಗೊಟ್ಟು ನೀನೊಮ್ಮೆ ಕೇಳಮ್ಮ
ಚೆಂದದ ನಗುವ ಬೀರಿಹೆನು, ಕಣ್ಮುಚ್ಚಿ ನನ್ನೊಮ್ಮೆ ನೋಡಮ್ಮ |
ನಿನಗಾಗಿ ಕಾದು ಕುಳಿತಿಹೆನು, ಎಂದು ಕರೆದೊಯ್ಯುವೆ ಹೇಳಮ್ಮ
ಪ್ರತಿ ಜನ್ಮದಲೂ ನೀನೇ ತಾಯಿ, ನಾನೇ ನಿನ್ನ ಮುದ್ದು ಕಂದಮ್ಮ ||
~🪔~
ಚೆಂದದ ಚಿನ್ನದ ರಥವನು ಏರಿ
ಮೇಲಕೆ ಜಿಗಿದು ಗಗನಕೆ ಹಾರಿ |
ಸುಂದರ ಕಾಮನ ಬಿಲ್ಲನು ಜಾರಿ
ಬಂದಳು ಒಬ್ಬಳು ರಾಜಕುಮಾರಿ ||
ಚಿಕ್ಕ ಕಾಲ್ಗಳನು ನೆಲಕ್ಕೆ ಊರಿ
ಪುಟ್ಟ ಕೈಗಳಲಿ ಮಾಯೆಯ ತೋರಿ |
ಮಲ್ಲಿಗೆ ಚೆಲ್ಲುವ ನಗುವನು ಬೀರಿ
ಬಂದಳು ನಮ್ಮ ಮುದ್ದಿನ ಪೋರಿ ||
ಅಮ್ಮನ ಚೆಂದದ ಹೆಗಲನು ಹೇರಿ
ರಾಣಿಯ ಹಾಗೆ ಮಡಿಲಲಿ ಕೂರಿ |
ಕೇಳುತ ಮಲಗಿ ಅಂದದ ಲೋರಿ
ಹೋದಳು ಗೌರಿ ನಿದಿರೆಗೆ ಜಾರಿ ||
ಹೊಳೆಯುವ ಕಂಗಳ ಓ ಸುಕುಮಾರಿ
ಗುಲಾಬಿ ಕೆನ್ನೆಯ ನೀ ವಯ್ಯಾರಿ |
ಹೊನ್ನಿನ ಗೊಂಬೆಯೇ ನೋಡಲು ನಿನ್ನ
ಓಡುತ ಬರುವಳು ಚಂದ್ರ ಚಕೋರಿ ||
~🪔~
ಮನೆಗೆ ತೆರಳಲು ಹತ್ತಿದ ಬಸ್ಸಲಿ ಕಂಡಿತು ಸುಂದರ ಲೋಕ
ಎದುರಿನ ಸೀಟಲಿ ಚೆಲುವೆಯು ಇರಲು ಎದೆಯಲಿ ಸಕ್ಕರೆ ಪಾಕ ||
ಸಾರಂಗ ನಯನ, ಸ್ಟ್ರಾಬೆರಿ ಅಧರ, ದನಿ ಅವಳದು ಅತಿ ಮಧುರ
ಅಕ್ಕ ಪಕ್ಕದಲಿಹ ಪುಂಡರ ನಡುವೆ ಸಾಗುತಿಹುದೊಂದು ಸಮರ ||
ಗೀತೆಯ ಗುನುಗುತಲಿ ಕೂತಿಹಳು ತನ್ನ ಇಯರ್ಫೋನನು ತೊಟ್ಟು
ತುಂಬಿದ ನಗುವಿಗೆ ಮೆರುಗ ತಂದಿದೆ ಆ ಪುಟ್ಟ ಹಣೆಯ ಬೊಟ್ಟು ||
ನೋಡಿ ಎನ್ನನು ಕಿರುನಗಲು ಅವಳು ಎದೆಯಲಿ ನೂರೆಂಟು ಚಿಟ್ಟೆ
ಚಿಟ್ಟೆಗಳ ಜೊತೆಜೊತೆಗೆ ಕನಸಿನೂರಿಗೆ ನಾನೂ ಹಾರಿಯೇ ಬಿಟ್ಟೆ ||
ಕಣ್ಮುಚ್ಚಿ ಬಿಡುವಷ್ಟರಲಿ ಬಂದೇ ಬಿಟ್ಟಿತು ನೋಡಿ ಬನಶಂಕರಿ
ಮೆಟ್ರೋ ದಾರಿ ನಾ ಹಿಡಿಯಲು ತನ್ನ ದಾರಿ ಹಿಡಿದಳು ಪೋರಿ ||
~🪔~
ಕೋಟಿ ಕವನಗಳ ಬರೆದರೂ, ಪದಗಳೇ ಸಿಗದು ಇವಳ ಹೊಗಳಲು |
ಹುಡುಕಬೇಕಿದೆ ಪದಕೋಶವನಿನ್ನು ನಾ ಕವನವ ಇವಳ ಬರೆಯಲು ||
ಸಿಹಿಯಾದ ದನಿ, ಸವಿಜೇನ ಹನಿ, ಮಧುರ ಮಂದಹಾಸವೇ ಇವಳ ಅಸ್ಮಿತಾ |
ಮನದಲಿ ನನ್ನ ಹರುಷ ತರುವಳು ಎಂದೂ, ಹೆಸರು ಇವಳದು ರಶ್ಮಿತಾ ||
ಬಣ್ಣ ಇವಳದು ಬಿಳುಪು, ಹುಣ್ಣಿಮೆಯ ಹೊಳಪು, ನೋಡಲಿವಳು ಶಾರದೆ |
ನಿಜವನೇ ಹೇಳಿರುವೆ, ಸುಳ್ಳಲ್ಲ ನನ್ನಾಣೆ, ನೀವೊಮ್ಮೆ ಇವಳ ನೋಡಬಾರದೆ ||
ಹಾಲ್ಗೆನ್ನೆ ಮೊಗದವಳು ಅತಿಸೌಮ್ಯ ನುಡಿಯವಳು ಕೃಷ್ಣಪ್ರಿಯೆ ನಮ್ಮ ಪೋರಿ |
ಸದಾ ನಗುತಿರಲೆಂದು ಬೇಡುವೆನು ನಾನಿಂದು ಕೈ ಮುಗಿದು ರಾಧೆಯ ಕೋರಿ ||
ಅಕ್ಕರೆಯ ತಂಗಿ, ಸಕ್ಕರೆಯ ನಡೆಯವಳು, ಪುಟ್ಟಿ ಎಂದು ನಾ ಕರೆದೆ |
ನೋಡು ನೋಡುತಲೇ ನೋಡಿ, ಇವಳಿಗೀ ಕವನವನು ಈ ರೀತಿ ನಾ ಬರೆದೆ ||
~🪔~